Friday, March 11, 2011

‘ಬಾಲಂ’ಗೋಚಿಗಳಾಗಿರುವ ಮುಸ್ಲಿಂ ನಾಯಕರು



‘ಬಾಲಂ’ಗೋಚಿಗಳಾಗಿರುವ ಮುಸ್ಲಿಂ ನಾಯಕರು
‘‘2006 ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯ ಸಂಬಂಧ ಒಂಬತ್ತು ಮುಸ್ಲಿಮ್ ಯುವಕರನ್ನು ಬಂಧಿಸಿರುವುದು ಅನ್ಯಾಯದ ಕ್ರಮ’’ ಎಂಬ ಹನ್ನೆರಡು ಶಬ್ದಗಳನ್ನು ಉದುರಿಸಲು ಕೊನೆಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್‌ಗೆ ಅವರಿಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ ಸಿಕ್ಕಿದೆ. ‘ಮುಸ್ಲಿಮ’ರೆಂಬ ಹಣೆಪಟ್ಟಿಯನ್ನು ಧರಿಸಿಕೊಂಡೇ ಕಾಂಗ್ರೆಸ್‌ನೊಳಗೆ ನುಸುಳಿರುವ ಈ ಸಮಯಸಾಧಕ ನಾಯಕರು ಈ ಒಂದು ವಾಕ್ಯವನ್ನು ಉಸುರಲು ಸೋನಿಯಾ ಗಾಂಧಿಯ ಅಪ್ಪಣೆಗಾಗಿ ಕಾಯುತ್ತಿದ್ದರೆಂದು ಕಾಣುತ್ತದೆ. ಇದೀಗ ಅವರ ಆದೇಶದ ಮೇರೆಗೆ ಅಮಾಯಕರ ಪರವಾಗಿ ಮಾತನಾಡಿ, ಇಡೀ ಮುಸ್ಲಿಮ್ ಸಮುದಾಯಕ್ಕೆ ‘ಉಪಕಾರ’ವನ್ನು ಮಾಡಿದ್ದಾರೆ.
ಮಾಲೆಗಾಂವ್ ಸ್ಫೋಟದಲ್ಲಿ ಕೇಸರಿ ಉಗ್ರರ ಕೈಚಳಕ ಹೊರ ಬಿದ್ದಿರುವುದು ಇಂದು ನಿನ್ನೆಯಲ್ಲ. ಮಾಧ್ಯಮಗಳು ಈ ಹಿಂದೆಯೇ ಇದರ ಕುರಿತಂತೆ ತಮ್ಮ ಅನುಮಾನಗಳನ್ನು ವ್ಯಕ್ತಪಡಿಸುತ್ತಾ ಬಂದಿದ್ದವು. ಆ ಸಂದರ್ಭದಲ್ಲಿ ಮುಸ್ಲಿಮ್ ನಾಯಕರೆಂದು ಕರೆಸಿಕೊಂಡ ಕಾಂಗ್ರೆಸ್ ಚೇಲಾಗಳು ತುಟಿ ಹೊಲಿದು ಕುಳಿತಿದ್ದರು. ಕೇಸರಿ ಉಗ್ರರ ಬಂಧನದ ಬಳಿಕವಾದರೂ ಅಮಾಯಕರ ಪರವಾಗಿ ಈ ‘ನಾಯಕ’ರು ಮಾತನಾಡಬಹುದಿತ್ತು. ಆದರೆ ಎಲ್ಲಿ ಕಾಂಗ್ರೆಸ್‌ನ ‘ವರ್ಚಸ್ಸಿ’ಗೆ, ಸೋನಿಯಾ ಗಾಂಧಿಯ ನಾಯಕತ್ವಕ್ಕೆ ನೋವಾಗಿ ಬಿಡುತ್ತದೋ ಎಂದು ಬಾಯಿ ಮುಚ್ಚಿ ಕುಳಿತಿದ್ದರು.
‘ಕರ್ಕರೆ’ಯ ಸಾವಿನ ಕುರಿತಂತೆ ಗಂಭೀರ ತನಿಖೆಯಾಗಬೇಕು ಎಂದು ಹೇಳಿಕೆ ನೀಡಿದ್ದ ಅಂತುಳೆಯ ಧ್ವನಿಯನ್ನು ಕಾಂಗ್ರೆಸ್‌ನೊಳಗೇ ಶಾಶ್ವತವಾಗಿ ಅಡಗಿಸಲಾಯಿತು. ಈ ಸಂದರ್ಭದಲ್ಲಿ ಉಳಿದ ಮುಸ್ಲಿಂ ನಾಯಕರು ಅಂತುಳೆಯ ಮಾತಿಗೆ ಧ್ವನಿ ಸೇರಿಸಿದ್ದಿದ್ದರೆ ಇಡೀ ಪ್ರಕರಣ ಬೇರೆಯೇ ತಿರುವು ಪಡೆದುಕೊಳ್ಳುತ್ತಿತ್ತು. ಕನಿಷ್ಠ, ಮಾಲೆಗಾಂವ್ ಮತ್ತು ಅಜ್ಮೀರ್ ಸ್ಫೋಟಕ್ಕೆ ಸಂಬಂಧಿಸಿ ಒಬ್ಬೊಬ್ಬರನ್ನೇ ಎಟಿಸ್ ಬಂಧಿಸ ತೊಡಗಿದಾಗಲಾದರೂ ಈ ಮುಸ್ಲಿಂ ನಾಯಕರೆಂದು ಕರೆಸಿಕೊಂಡವರು ‘ಅಮಾಯಕ’ರ ಪರವಾಗಿ ಮಾತನಾಡುವ ಧೈರ್ಯ ತೋರಿಸಬಹುದಿತ್ತು. ಆದರೆ ಅಂತಹ ಮಾತು ಎಲ್ಲಿ ತಮ್ಮ ಸ್ಥಾನವನ್ನು ಅಲುಗಾಡಿಸಿ ಬಿಡುತ್ತದೋ ಎಂದು, ಸೋನಿಯಾ ಗಾಂಧಿಯ ಆಸ್ಥಾನದ ಭಟ್ಟಂಗಿಗಳಾಗಿಯೇ ತಮ್ಮ ಬದುಕನ್ನು ಸಾರ್ಥಕಗೊಳಿಸತೊಡಗಿದರು.
ಕಾಂಗ್ರೆಸ್‌ನ ನಾಯಕರಲ್ಲೊಬ್ಬರಾದ ದಿಗ್ವಿಜಯ್ ಸಿಂಗ್ ಕೇಸರಿ ಉಗ್ರರ ಕುರಿತಂತೆ ಸ್ಪಷ್ಟ ಹೇಳಿಕೆಗಳನ್ನು ನೀಡತೊಡಗಿದಾಗಲಾದರೂ ಈ ಕಾಂಗ್ರೆಸ್ ನಾಯಕರೆಂದು ಕರೆಸಿಕೊಂಡವರು ಅವರ ಬೆನ್ನಿಗೆ ನಿಲ್ಲಬಹುದಿತ್ತು. ಆದರೆ ಆಗಲೂ ಅವರು ವರಿಷ್ಠರ ಬೂಟು ನೆಕ್ಕುವುದರಲ್ಲಿ ತಮ್ಮ ಹುದ್ದೆಯನ್ನು ಸಾರ್ಥಕ ಪಡಿಸಿಕೊಳ್ಳುತ್ತಿದ್ದರು. ಇದೀಗ, ಅಮಾಯಕ ತರುಣರ ನಿರಪರಾಧಿತ್ವ ಸಾಬೀತಾಗುತ್ತಿರುವ ಹೊತ್ತಿನಲ್ಲಿ, ಅಲ್ಪಸಂಖ್ಯಾತರ ನಾಯಕರೆಂದು ಕರೆಸಿಕೊಂಡವರು ತುಟಿ ಬಿಚ್ಚಿದ್ದಾರೆ. ಅದೇನೂ ಅವರ ಸ್ವತಂತ್ರ ನಿರ್ಧಾರದಂತೆ ಕಾಣುತ್ತಿಲ್ಲ. ‘ಏನಾದರೂ ನಾಲ್ಕು ಮಾತುಗಳನ್ನು ಎಸೆದು ಬಿಡಿ’ ಎಂದು ನಾಯಕರಿಂದ ಅನುಮತಿ ದೊರಕಿದ ಬಳಿಕವೇ ಅವರು ಅಮಾಯಕರ ಬಂಧನದ ಕುರಿತಂತೆ ತಮ್ಮ ‘ಆಕ್ರೋಶ’ವನ್ನು ವ್ಯಕ್ತಪಡಿಸಿದ್ದಾರೆ.
ನಾಲ್ಕು ಬಿಸ್ಕೆಟ್‌ಗಳನ್ನು ಎಸೆದರೆ ಸಾಕು, ಮುಸ್ಲಿಮ್ ನಾಯಕರು ಬಾಲ ಅಲ್ಲಾಡಿಸುತ್ತಾ ತಮ್ಮ ಹಿಂದೆ ಬರುತ್ತಾರೆನ್ನುವ ಸತ್ಯ ನಮ್ಮ ಕಾಂಗ್ರೆಸ್‌ಗೆ ಎಂದೋ ಸ್ಪಷ್ಟವಾಗಿದೆ. ಆದುದರಿಂದಲೇ, ಶೇ. 30ಕ್ಕೂ ಅಧಿಕ ಸಂಖ್ಯಾ ಬಲವುಳ್ಳ ಮುಸ್ಲಿಮ್ ಸಮುದಾಯಕ್ಕೆ ಸಿಕ್ಕಿರುವುದು ‘ನಾಯಿ ಬಿಸ್ಕೆಟ್’ಗಳಷ್ಟೇ. ಅದನ್ನೇ ತಿಂದುಕೊಂಡು ಮುಸ್ಲಿಮರ ನಾಯಕರೆಂದು ಕರೆಸಿಕೊಂಡವರು ತಪ್ತಿ ಪಡುತ್ತಿದ್ದಾರೆ. ಅತ್ಯಂತ ಕಡಿಮೆ ಜನಸಂಖ್ಯೆಯುಳ್ಳ ಸಿಖ್ ಸಮುದಾಯಕ್ಕೆ ಸಿಕ್ಕಿದ ಪ್ರಾತಿನಿಧ್ಯ, ಕ್ರಿಶ್ಚಿಯನ್ ಸಮುದಾಯಕ್ಕೆ ಸಿಕ್ಕಿದ ಪ್ರಾತಿನಿಧ್ಯವನ್ನು ಗಮನಿಸೋಣ. ಅವರಿಗೆ ಸಿಕ್ಕಿದ ಸ್ಥಾನಮಾನಗಳಿಗಾಗಿ ಆ ಸಮುದಾಯಗಳನ್ನು ಅಭಿನಂದಿಸುತ್ತಲೇ ಮುಸ್ಲಿಮ್ ಸಮುದಾಯತ್ತ ನಮ್ಮ ಕಣ್ಣನ್ನು ತಿರುಗಿಸೋಣ. ಯಾವುದೇ ಮಹತ್ತ್ವದ ಖಾತೆಗಳಿಗೆ ಮುಸ್ಲಿಮ್ ನಾಯಕರನ್ನು ಕಾಂಗ್ರೆಸ್ ಆಯ್ಕೆ ಮಾಡಿಲ್ಲ.
ಈ ದೇಶದ ಅಲ್ಪಸಂಖ್ಯಾತ ಸಿಖ್ ಸಮುದಾಯಕ್ಕೆ ಸೇರಿದ ನಾಯಕನೊಬ್ಬ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಹಲವು ನಾಯಕರು ಈ ದೇಶದ ಅತ್ಯುನ್ನತ ಸಚಿವ ಸ್ಥಾನಗಳನ್ನು ಅಲಂಕರಿಸಿ ದ್ದಾರೆ. ಅದಕ್ಕಾಗಿ ನಾವು ಕಾಂಗ್ರೆಸನ್ನು ಶ್ಲಾಘಿಸಬೇಕು. ಇದೇ ಸಂದರ್ಭದಲ್ಲಿ, ಮುಸ್ಲಿಮರನ್ನು ತಮ್ಮ ಓಟಿನ ರಾಜಕೀಯಕ್ಕಾಗಿ ಬಳಸುತ್ತಾ ಬಂದಿರುವ ಕಾಂಗ್ರೆಸ್, ಅವರಿಗೆ ಉನ್ನತ ಸ್ಥಾನವನ್ನು ನೀಡುವ ಸಂದರ್ಭದಲ್ಲಿ ಮಾತ್ರ ಅನ್ಯಾಯವನ್ನು ಎಸಗುತ್ತಾ ಬಂದಿದೆ. ಸಣ್ಣ ಪುಟ್ಟ ಕೆಲವು ನಾಯಕರಿಗೆ ‘ಬಿಸ್ಕತ್’ಗಳನ್ನು ಹಾಕಿ ಅವರನ್ನು ಮುಸ್ಲಿಂ ನಾಯಕರು ಎಂದು ಬಿಂಬಿಸಲು ಹೊರಟಿದೆ ಕಾಂಗ್ರೆಸ್. ಆ ನಾಯಕರೂ ಅಷ್ಟೇ. ಆ ಬಿಸ್ಕತ್‌ಗಳಿಂದ ತಮ್ಮ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳುತ್ತಿದ್ದಾರೆ.
ಮುಸ್ಲಿಮರ ಸಮಸ್ಯೆಗಳ ಕುರಿತಂತೆ ಮಾತನಾಡಿದರೆ, ಅಮಾಯಕರ ನೋವುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ ಎಲ್ಲಿ ತಮ್ಮ ನಾಯಕಿಯ ಮನಸ್ಸಿಗೆ ಬೇಸರವಾಗಿ ಬಿಡಬಹುದೋ ಎನ್ನುವ ಭಯ ದೊಂದಿಗೆ ತಮ್ಮ ಸ್ಥಾನವನ್ನು ನಿರ್ವಹಿಸುತ್ತಿದ್ದಾರೆ. ಯಾವಾಗ ಬೊಗಳಬೇಕು ಎನ್ನುವುದಕ್ಕೆ, ತಮ್ಮ ನಾಯಕಿಯ ಚಿಟಿಕೆ ಸದ್ದಿಗಾಗಿ ಕಿವಿ ನಿಮಿರಿಸಿಕೊಂಡು ಕುಳಿತಿರುತ್ತಾರೆ. ಇದೀಗ, ಮಾಲೆಗಾಂವ್ ಅಮಾಯ ಕರ ಬಗ್ಗೆ ಮುಸ್ಲಿಂ ನಾಯಕರು ಮೊಸಳೆ ಕಣ್ಣೀರು ಸುರಿಸುತ್ತಿರುವುದೂ ಕಾಂಗ್ರೆಸ್ ವರಿಷ್ಠರ ಸೂಚನೆಯ ಮೇರೆಗೇ.
ಮುಸ್ಲಿಮರ ಮೇಲೆ ಪದೇ ಪದೇ ದಾಳಿಗಳು, ದಬ್ಬಾಳಿಕೆಗಳು ನಡೆಯುತ್ತಾ ಬಂದಿರುವುದು ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ. ಮುಸ್ಲಿಂ ಸಮುದಾಯದ ನಾಯಕರೆಂದು ಕರೆಸಿಕೊಂಡವರು ಒಂದಿಷ್ಟು ಸ್ವಂತಿಕೆಯನ್ನು, ತಮ್ಮತನವನ್ನು ಪ್ರದರ್ಶಿಸಿದ್ದರೆ ಮುಸ್ಲಿಮರಿಗೆ ಈ ಸ್ಥಿತಿ ಬರುತ್ತಿರಲಿಲ್ಲವೇನೋ. ಮುಸ್ಲಿಂ ಸಮುದಾಯದ ಬಡತನ, ಅನಕ್ಷರತೆ ಮೊದಲಾದವುಗಳ ಕುರಿತಂತೆ ಪ್ರಾಮಾಣಿಕ ಕಾಳಜಿಯಿಂದ ಕಾಂಗ್ರೆಸ್ ವರಿಷ್ಠರೊಂದಿಗೆ ಬಡಿದಾಡಿದ್ದರೆ, ಮುಸ್ಲಿಮರ ಮೂಲಭೂತ ಅಗತ್ಯ ಗಳಿಗಾಗಿ ತಮ್ಮ ಸಮುದಾಯದ ಮತಗಳನ್ನು ವ್ಯಾಪಾರಕ್ಕಿಟ್ಟಿದ್ದರೆ ಇಂದು ದೇಶದ ಸ್ಥಿತಿ ಈ ಮಟ್ಟಕ್ಕೆ ಕೆಳಗಿಳಿಯುತ್ತಿರಲಿಲ್ಲ.
ಆದರೆ, ನಾಲ್ಕು ಬಿಸ್ಕತ್‌ಗಳಿಗೆ ಕೆಲ ನಾಯಕರು ಇಡೀ ಮುಸ್ಲಿಂ ಸಮುದಾಯದ ಹಿತಾಸಕ್ತಿಗಳನ್ನೇ ಕಾಂಗ್ರೆಸ್ ವರಿಷ್ಠರ ಪದತಲದ ಕೆಳಗಿಟ್ಟರು. ಮುಂದಿನ ದಿನಗಳಲ್ಲಿ, ಕೇಂದ್ರ ಸಚಿವ ಸ್ಥಾನಗಳನ್ನು ಹಂಚುವ ಸಂದರ್ಭದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ನಾಯಕನ ಹೆಸರಿಲ್ಲದೇ ಹೋದರೆ ಅದಕ್ಕೆ ಅಚ್ಚರಿ ಪಡಬೇಕಾಗಿಲ್ಲ. ರಹ್ಮಾನ್‌ಖಾನ್‌ರಂತಹ ಒಂದಿಬ್ಬರಿಗೆ ರಾಜ್ಯಸಭಾ ಸ್ಥಾನ ದಕ್ಕಿದರೆ, ಕಾಂಗ್ರೆಸ್ ಪಕ್ಷದ ‘ಮುಸ್ಲಿಮರ ಅಭಿವದ್ಧಿ’ ಮುಗಿಯುತ್ತದೆ.
ರಾಜಕೀಯವಾಗಿ ಮುಸ್ಲಿಮರು ಇನ್ನಾದರೂ ಎಚ್ಚೆತ್ತುಕೊಳ್ಳದೆ ಇದ್ದರೆ, ಇಡೀ ಸಮುದಾಯವನ್ನು ನಾಲ್ಕು ನಾಯಿ ಬಿಸ್ಕತ್‌ಗಳಿಗಾಗಿ ಈ ನಾಯಕರು ಬಲಿ ಕೊಡಲಿದ್ದಾರೆ. ಇಡೀ ಮುಸ್ಲಿಂ ಸಮುದಾಯದ ಮೂಲಭೂತ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅದಕ್ಕಾಗಿ ಸರಕಾರದೊಂದಿಗೆ ಬಡಿದಾಡುವ ನಾಯಕರನ್ನು ಮುಸ್ಲಿಮರು ಬೆಳೆಸಬೇಕಾಗಿದೆ. ಮುಸ್ಲಿಮರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವದ್ಧಿಯಾದರೆ, ಕಾಲು ಭಾಗ ಭಾರತ ಅಭಿವದ್ಧಿ ಯಾದಂತೆ. ಈ ನಿಟ್ಟಿನಲ್ಲಿ ರಾಜಕೀಯ ಜಾಗತಿ ಯೊಂದು ಮುಸ್ಲಿಮ್ ಸಮುದಾಯದ ಒಳಗಿನಿಂದಲೇ ಹುಟ್ಟಿಕೊಳ್ಳಬೇಕಾಗಿದೆ.

No comments:

Post a Comment